ಜಗಳಗಂಟಿ
ಎಬಿನೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಮರ. ಕಲ್ನಂದಿ, ಬಿಲ್ಕುನಿಕ, ಪರ್ಯಾಯ ನಾಮಗಳು. ಡೈಯೋಸ್ಪೈರಾಸ್ ಮಾಂಟಾನ ಇದರ ಶಾಸ್ತ್ರೀಯ ಹೆಸರು. ಇಂಗ್ಲಿಷಿನಲ್ಲಿ ಮೌಂಟನ್ ಪರ್ಸಿಮನ್ ಎಂದು ಕರೆಯಲಾಗುತ್ತದೆ. ಭಾರತದಲ್ಲೆಲ್ಲ ಇದು ಬೆಳೆಯುವುದುಂಟು. ಇದರ ಕೊಂಬೆಯನ್ನು ಮನೆಯಲ್ಲಿಟ್ಟರೆ ಅಲ್ಲಿ ಪ್ರತಿದಿನ ಜಗಳ ಇರುತ್ತದೆ ಎಂಬ ಮೂಢನಂಬಿಕೆಯಿದೆ. ಬಹುಶಃ ಇದರಿಂದಲೇ ಮರಕ್ಕೆ ಜಗಳಗಂಟಿ ಎಂಬ ಹೆಸರು ಬಂದಿರಬೇಕು. ಇದರ ಎಲೆಗಳನ್ನು ಜಾನುವಾರುಗಳ ಮೇವಾಗಿ ಉಪಯೋಗಿಸುವುದಿದೆ. ಚೌಬೀನೆಯನ್ನು ಕೃಷಿ ಉಪಕರಣ, ಬಾಗಿಲು, ಕಿಟಕಿ ಮತ್ತು ಇತರ ಮರದ ಸಾಮಾನು ತಯಾರಿಕೆಗೆ ಬಳಸುತ್ತಾರೆ. ಇದು ಒಳ್ಳೆಯ ಉರುವಲೂ ಹೌದು. ಜಗಳಗಂಟಿ ಔಷಧೀಯ ಪ್ರಾಮುಖ್ಯ ಉಂಟು. ಜಗಳಗಂಟಿ ದೊಡ್ಡ ಪೊದೆ ಇಲ್ಲವೆ ಸಣ್ಣಮರವಾಗಿ ಬೆಳೆಯುತ್ತದೆ. ಇದೊಂದು ಪರ್ಣಪಾತಿ ಸಸ್ಯ. ರೆಂಬೆಗಳ ಮೇಲೆ ಕೆಲವೊಮ್ಮೆ ಮುಳ್ಳುಗಳಿರುವುದುಂಟು. ಕಾಂಡ ಹಳದಿ ಅಥವಾ ಕಂದು ಮಿಶ್ರಿತ ಬೂದು ಬಣ್ಣದ್ದು. ಗಟ್ಟಿ ಹಾಗೂ ಭಾರವಾಗಿದೆ. ಎಲೆಗಳು ಕರನೆಯಾಕಾರ ಅಥವಾ ಆಯತಾಕಾರದವು; ಇವು ನಯವಾಗಿರಬಹುದು ಇಲ್ಲವೆ ಸೂಕ್ಷ್ಮರೋಮಗಳಿಂದ ಆವೃತವಾಗಿರಬಹುದು. ಹೂಗಳು ಏಕಲಿಂಗಿಗಳು. ಹೆಣ್ಣುಹೂಗಳಿಗೆ ತೊಟ್ಟಿಲ್ಲ.

ಜಗಳಗಂಟಿಯನ್ನು ಬೀಜಗಳಿಂದ ಬೆಳೆಸಲಾಗುತ್ತದೆ. ಸಾಮಾನ್ಯವಾಗಿ ಬೀಜಗಳು ಮಳೆಗಾಲದಲ್ಲಿ ಮೊಳೆಯುತ್ತವೆ. ಸಸಿಗಳಿಗೆ ನೆರಳು ಆವಶ್ಯಕ. ಅವು ಚೆನ್ನಾಗಿ ಬೇರೂರುವವರೆಗೂ ನೆರಳನ್ನು ಒದಗಿಸಲಾಗುತ್ತದೆ. ಸಸಿಗಳು 1/3 ಮಿ. ಎತ್ತರ ಬೆಳೆದ ಮೇಲೆ ಅವನ್ನು ಕಿತ್ತು ಬೇಕಾದ ಸ್ಥಳಗಳಲ್ಲಿ ನಾಟಿ ಮಾಡುವುದುಂಟು.
(ಎಸ್.ಐ.ಎಚ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ